ಡೆನಿಸ್, ಜಾನ್
1657-1734. ಇಂಗ್ಲಿಷ್ ವಿಮರ್ಶಕ, ನಾಟಕಕಾರ. 1679ರಲ್ಲಿ ಬಿ.ಎ. ಪದವಿಯನ್ನೂ 1683ರಲ್ಲಿ ಎಂ.ಎ. ಪದವಿಯನ್ನೂ ಪಡೆದ. ಫ್ರಾನ್ಸ್ ಮತ್ತು ಇಟಲಿಗಳಲ್ಲಿ ಪ್ರವಾಸಮಾಡಿ ಬಂದು ಹ್ವಿಗ್ ರಾಜಕೀಯ ಪಕ್ಷದ ಸದಸ್ಯನಾಗಿ ರಾಜಕಾರಣಕ್ಕಿಳಿದ. ಡ್ರೈಡನ್, ವೈಖರ್ಲಿ, ಹ್ಯಾಲಿಫಾಕ್ಸ್ ಮತ್ತು ಕಾಂಗ್ರೀವ್ ಈತನ ಪರಮ ಮಿತ್ರರಾಗಿದ್ದರು. ಈತನ ನಾಟಕಗಳಲ್ಲಿ ಒಂದೆರಡು ಹೊರತು ಉಳಿದ ಯಾವುವೂ ಚೆನ್ನಾಗಿರಲಿಲ್ಲ. ಒಂಬತ್ತು ನಾಟಕಗಳನ್ನು ರಂಗದ ಮೇಲೆ ತರಲಾಯಿತು. ಅವುಗಳಲ್ಲಿ ಲಿಬರ್ಟಿ ಅಸರ್ಟೆಡ್ (1704) ಮತ್ತು ಆ್ಯಪಿಯಸ್ ಅಂಡ್ ವರ್ಜೀನಿಯಾ (1709) ಮಾತ್ರ ಯಶಸ್ವಿಯಾದುವು. 

	ಡೆನಿಸ್‍ನ ವಿಮರ್ಶೆಯ ಭಾಷೆ ಬಿರುಸಾದುದು, ಹರಿತವಾದುದು. ಒಳ್ಳೆಯ ವಿಚಾರಗಳು ಭಾವನೆಗಳು ಇದ್ದರೂ ಕೇವಲ ಪೂರ್ವಾಗ್ರಹ ಪೀಡಿತವಾದ ವಿಮರ್ಶೆಯೇ ಆಗಿರುತ್ತಿತ್ತು. ಅಲೆಕ್ಸಾಂಡರ್ ಪೋಪ್‍ನ ಕೃತಿಗಳನ್ನು ಕಟುವಾಗಿ ಟೀಕಿಸಿದ. ಕೆರಳಿದ ಪೋಪ್ ತನ್ನ ವಿಡಂಬನೆಯ ಮಹಾಸ್ತ್ರವನ್ನು ಡೆನಿಸ್‍ನ ಮೇಲೆ ಪ್ರಯೋಗಿಸಿದ. ತನ್ನ ಸುಪ್ರಸಿದ್ಧ ವಿಡಂಬನ ಕೃತಿ ದಿ ಡನ್ಸಿಯಡ್ ಎಂಬ ಕಾವ್ಯದಲ್ಲಿ ಡೆನಿಸ್‍ನನ್ನು ಒಬ್ಬ ಕಡುಮೂರ್ಖನನ್ನಾಗಿ ಚಿತ್ರಿಸಿದ.

	ಲೆಟರ್ಸ್ ಆನ್ ಮಿಲ್ಟನ್ ಅಂಡ್ ಕಾಂಗ್ರೀವ್ (1696), ದಿ ಗ್ರೌಂಡ್ಸ್ ಆಫ್ ಕ್ರಿಟಿಸಿಸಮ್ ಇನ್ ಪೊಯೆಟ್ರಿ (1704), ಎನ್ ಎಸ್ಸೆ ಆನ್ ದಿ ಜೀನಿಯಸ್ ಅಂಡ್ ರೈಟಿಂಗ್ಸ್ ಆಫ್ ಷೇಕ್ಸ್‍ಪಿಯರ್ (1712), ದಿ ಅಡ್ವಾನ್ಸ್‍ಮೆಂಟ್ ಅಂಡ್ ರಿಫಾರ್ಮೇಷನ್ ಆಫ್ ಮಾಡರ್ನ್ ಪೊಯೆಟ್ರಿ (1701)- ಇವು ಈತನ ವಿಮರ್ಶಾ ಕೃತಿಗಳು. ಇವನು ಕೆಲವು ಕವನಗಳನ್ನು ಬರೆದ. 		                  											   (ಕೆ.ಬಿ.ವಿ.)
                 								 (ಪರಿಷ್ಕರಣೆ: ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ